ಕೃಷಿ ಉದ್ದರಿ (ಸಾಲ)

ಇತರ ಉತ್ಪಾದನೋದ್ಯಮಗಳಂತೆ ಕೃಷಿ ಉದ್ಯಮದ ಯಶಸ್ಸು ಹಲವು ಅಂಗಗಳ ಸಂಯೋಜನೆಯ ಫಲ, ನೆಲ ಮತ್ತು ಶ್ರಮಗಳೊಂದಿಗೆ ಬಂಡವಾಳವನ್ನು ಕೂಡಿಸಿ ಸಮರ್ಥವಾಗಿ ನಿರ್ವಹಿಸುವುದೇ ಆಧುನಿಕ ಬೇಸಾಯದ ಗೆಲವಿನ ಗುಟ್ಟು. ಕೃಷಿಗೆ ಅವಶ್ಯವಾದ ಬೀಜ, ಗೊಬ್ಬರ ಮುಂತಾದವನ್ನು ಹೊಂದಿಸಿಕೊಳ್ಳಲು ಬಂಡವಾಳ ಅಗತ್ಯ. ವರಮಾನದ ಗಾತ್ರ ನಿರ್ಧರಿಸುವ ಅಂಶಗಳಲ್ಲಿ ಬಂಡವಾಳವೂ ಒಂದು. ಇತರ ಕ್ಷೇತ್ರಗಳಂತೆ ಕೃಷಿಕ್ಷೇತ್ರದಲ್ಲೂ ಬಂಡವಾಳ ಅವಶ್ಯ.

	ಕೃಷಿಯ ಉತ್ಪಾದನೆಗೆ ತಗಲುವ ನಾನಾ ಬಗೆಯ ವೆಚ್ಚಗಳನ್ನು ಪೂರೈಸಲು ರೈತನಿಗೆ ಒದಗಿ ಬರುವ ಸಾಲದ ನೆರವು ಕೃಷಿ ಉದ್ದರಿ ಅಥವಾ ಕೃಷಿ ಪತ್ತು ಎನಿಸಿಕೊಳ್ಳುತ್ತದೆ. ಇತರ ಕ್ಷೇತ್ರಗಳಲ್ಲಿಯ ಉತ್ಪಾದಕರಂತೆ ರೈತರಿಗೂ ಸಾಲದ ಅವಶ್ಯಕತೆ ಬಹಳಷ್ಟು ಉಂಟು. ಇಂದಿನ ಕೃಷಿ ಉತ್ಪಾದನೆ ವಿಜ್ಞಾನ ಮತ್ತು ತಾಂತ್ರಿಕ ಸಹಾಯದಿಂದ ಬಹಳ ಮುಂದುವರಿದಿದೆ. ವ್ಯವಸಾಯದಲ್ಲೂ ವಾಣಿಜ್ಯ ಅಥವಾ ಔದ್ಯೋಗಿಕ ಕ್ಷೇತ್ರದಲ್ಲಿರುವಂತೆ ಬಂಡವಾಳದ ಕೊರತೆಯನ್ನು ನೀಗಲು ಸಾಲದ ಅವಶ್ಯಕತೆಯುಂಟು. ಬಂಡವಾಳವಿಲ್ಲದೆ ರೈತನ ಕಸುಬು ಸಾಗದು. ಬಂಡವಾಳದ ಅಭಾವ ಅಥವಾ ಅದರ ತೀವ್ರ ಕೊರತೆಯೇ ಸಾಮಾನ್ಯವಾಗಿ ಎಲ್ಲ ದೇಶಗಳಲ್ಲಿ ವ್ಯವಸಾಯ ಎದುರಿಸುತ್ತಿರುವ ಒಂದು ಪ್ರಮುಖ ಸಮಸ್ಯೆ. ಹಿಂದಿನಿಂದ ರೂಢಿಯಲ್ಲಿರುವ ಸಂಸ್ಥೆಯೇತರ ಮೂಲಗಳನ್ನೇ ಉದ್ದರಿಯ ಪೂರೈಕೆಗಾಗಿ ಹೆಚ್ಚಾಗಿ ಅವಲಂಬಿಸಬೇಕಾಗಿರುವ ಭಾರತದಂಥ ಅಭಿವೃದ್ಧಿಶೀಲ ದೇಶಗಳಲ್ಲಿ ಈ ಸಮಸ್ಯೆ ತುಂಬ ತೀವ್ರವಾಗಿದೆ. ಇಂಥ ರಾಷ್ಟ್ರಗಳಲ್ಲಿ ಸಾಮಾನ್ಯ ಕೃಷಿಕನ ಆದಾಯ ತೀರ ಕಡಿಮೆ. ಆದ್ದರಿಂದ ಆತನಿಗೆ ತನ್ನ ಬಂಡವಾಳವನ್ನು ಪ್ರತಿ ವರ್ಷ ವೃದ್ಧಿಪಡಿಸಿಕೊಳ್ಳಲು ಉಳಿತಾಯವೇ ಇರುವುದಿಲ್ಲ. ಇಂಥ ಸ್ಥಿತಿಯಲ್ಲಿ ಸಾಲರೂಪದಲ್ಲಿ ದೊರೆತ ಹಣವೇ ಅಂದರೆ ಉದ್ದರಿಯೇ, ಬೇಸಾಯಗಾರನ ಉತ್ಪಾದನೆಯನ್ನು ಹೆಚ್ಚಿಸಿ, ಬೆಳೆವ ಸರಕಿನ ಗುಣಮಟ್ಟವನ್ನು ಉತ್ತಮಪಡಿಸಿಕೊಳ್ಳಲು ಸಾಧಕವಾಗುತ್ತದೆ. ಇದರಿಂದ ಬೇಸಾಯ ಒಂದು ಲಾಭದಾಯಕ ಉದ್ಯಮವಾಗಿ ಪರಿವರ್ತನೆಯಾಗಲು ಸಾಧ್ಯ. ಪತ್ತಿನ ಉಪಯೋಗದಿಂದ ರೈತರಿಗೆ ಸಾಕಷ್ಟು ಅಧಿಕ ಆದಾಯ ಬಂದು, ಪಡೆದ ಸಾಲದ ಮೊಬಲಗನ್ನು ಅದರ ಅವಧಿಯೊಳಗಾಗಿ ಬಡ್ಡಿಸಮೇತ ಮರುಪಾವತಿ ಮಾಡುವುದಷ್ಟೇ ಅಲ್ಲದೆ, ತನ್ನ ಜೀವನಕ್ಕೆ ಸಾಮಾನ್ಯವಾಗಿ ಬೇಕಾಗುವಷ್ಟನ್ನುಉಳಿಸಿಕೊಂಡು, ಬೇಸಾಯಕ್ಕೆ ಮರುಬಂಡವಾಳ ಹಾಕುವಷ್ಟಿರಬೇಕು. ಹಾಗಲ್ಲದೆ ಪತ್ತಿನ ಉಪಯೋಗದಿಂದ ಬಂದ ಅಧಿಕ ಉತ್ಪತ್ತಿ ಬಡ್ಡಿಯ ಸಮೇತ ಸಾಲದ ಮರುಪಾವತಿಗೆ ಮತ್ತು ಜೀವನ ಸರಿತೂಗಿಸಲು ಮಾತ್ರ ಸಾಕಾಗುವಷ್ಟಾದರೆ ಮುಂದೆಯೂ ರೈತನ ಉತ್ಪಾದನೆಯನ್ನು ಆ ಮಟ್ಟದಲ್ಲಿ ಮುಂದುವರಿಸಿಕೊಂಡು ಹೋಗಲು ಪುನಃಪುನಃ ಸಾಲ ಕೊಡುತ್ತಿರಬೇಕಾಗುತ್ತದೆ. ಆಗ ಉದ್ದರಿ ವ್ಯವಸ್ಥೆ ಪ್ರಗತಿಪರವಾಗಲು ಸಾಧ್ಯವಿರುವುದಿಲ್ಲ. ಹೆಚ್ಚು ಉದ್ದರಿಯನ್ನು ಒದಗಿಸಲು ಸಾಧ್ಯವಾಗದುದರಿಂದ ಈ ಸೌಲಭ್ಯವನ್ನು ಅತಿ ಹೆಚ್ಚು ಮಂದಿ ರೈತರಿಗೆ ವಿಸ್ತರಿಸಲು ಅಡಚಣೆಯಾಗುತ್ತದೆ.

	ಉದ್ದರಿಯ ಬಳಕೆಯ ಬಗ್ಗೆ ಬಹು ಮುಖ್ಯವಾದ ಒಂದು ಅಂಶವನ್ನು ಗಮನದಲ್ಲಿಡಬೇಕು. ವಿವೇಚನೆಯಿಂದ ಉಪಯೋಗಿಸಿದಲ್ಲಿ ಅದು ರೈತನ ಉತ್ಪಾದನೆಯನ್ನು ಅಧಿಕಗೊಳಿಸಿ ಅವನ ಆರ್ಥಿಕ ಸ್ಥಿತಿಗತಿಗಳನ್ನು ಉತ್ತಮಪಡಿಸುವ ಅಸ್ತ್ರವಾಗಬಲ್ಲದು : ಉದ್ದರಿಯನ್ನು ವಿವೇಚನಾರಹಿತವಾಗಿ ಉಪಯೋಗಿಸಿದ್ದೇ ಆದರೆ ರೈತನಿಗೆ ಅದೊಂದು ದೊಡ್ಡ ಹೊರೆಯಾಗಿ, ಆತನ ಆರ್ಥಿಕ ಭವಿಷ್ಯಕ್ಕೆ ದೊಡ್ಡ ಗಂಡಾಂತರವೇ ಆಗಬಹುದು. ಹಿಂದಿನ ಕಾಲದಲ್ಲಿ ರೈತ ತನ್ನ ಜೀವನೋಪಾಯವನ್ನು ತನ್ನ ದೈಹಿಕ ದುಡಿಮೆಯಿಂದ ಗಳಿಸಿಕೊಳ್ಳುತ್ತಿದ್ದ. ಈಗ ಆತನಿಗೆ ಸಹಾಯಕವಾಗಿ ಯಾಂತ್ರಿಕ ಮತ್ತು ಆರ್ಥಿಕ ಉಪಕರಣಗಳಿವೆ. ಅಂದರೆ ಉದ್ದರಿಯೂ ಸಲಕರಣೆ, ವಿದ್ಯುತ್ತು, ಬೀಜ, ಗೊಬ್ಬರ ಮುಂತಾದವುಗಳಂತೆ ಉತ್ಪಾದನೆಯ ಒಂದು ಮುಖ್ಯ ಉಪಕರಣ. ಇದನ್ನರಿತು ಬುದ್ಧಿವಂತಿಕೆಯಿಂದ ಉದ್ದರಿಯನ್ನು ಬಳಸಿಕೊಂಡರೆ ಆ ವ್ಯವಸ್ಥೆಯಿಂದ ಕೊಡುವ ತೆಗೆದುಕೊಳ್ಳುವ ಎರಡು ಪಕ್ಷಗಳಿಗೂ ಅನುಕೂಲವಾಗುವುದಲ್ಲದೆ ದೇಶಕ್ಕೂ ಒಳಿತಾಗುತ್ತದೆ. ಸಾಲಿಗನಿಗೆ ಬಡ್ಡಿಯ ಸಮೇತ ಸಾಲದ ಮರುಪಾವತಿ ಖಾತರಿಯಾಗಿ, ಸುಸೂತ್ರವಾಗಿ ಆತ ಉದ್ದರಿಯನ್ನೊದಗಿಸಲು ಸಹಕಾರಿಯಾಗುತ್ತದೆ.

	ವಾಣಿಜ್ಯ ಮತ್ತು ಕೈಗಾರಿಕೆಗಳಲ್ಲಿ ರೂಢಿಯಲ್ಲಿರುವ ಉದ್ದರಿ ವ್ಯವಸ್ಥೆಯನ್ನೇ ಕೃಷಿರಂಗದಲ್ಲಿ ಅನುಸರಣೆಗೆ ತರಲು ಸಾಧ್ಯವಿಲ್ಲ. ವ್ಯವಸಾಯೋದ್ಯಮ ಮತ್ತು ವ್ಯವಸಾಯಗಾರನ ಸಂಸಾರ-ಇವೆರಡೂ ಒಂದಕ್ಕೊಂದು ಹಾಸುಹೊಕ್ಕಾಗಿವೆ. ಈ ಪರಿಸ್ಥಿತಿ ಇನ್ನಾವ ರಂಗದಲ್ಲೂ ಅಷ್ಟಾಗಿ ಕಾಣಬರುತ್ತಿಲ್ಲ. ಬಹುತೇಕ ಹಿಡುವಳಿಗಳು ಸಣ್ಣವೂ, ಹಾಗೂ ಅವು ಲಕ್ಷಾಂತರ ಹಿಡುವಳಿದಾರರ ಅಧೀನದಲ್ಲಿವೆ. ಕೃಷಿ ಉತ್ಪಾದನೆ ಸಾಮಾನ್ಯವಾಗಿ ಋತುಮಾನಗಳಿಗನುಸಾರವಾಗಿ ನಡೆಯುವ ಕ್ರಿಯೆ; ಅಲ್ಲದೆ ಇದು ಜೀವಿಸಂಬಂಧವಾದ ಕ್ರಿಯೆ; ಪ್ರಾಣಿ ಮತ್ತು ಸಸ್ಯ ಜೀವಿಗಳ ಬೆಳವಣಿಗೆಯ ಫಲ. ಇಲ್ಲಿ ಉತ್ಪಾದನೆ ತಯಾರಿಕಾಕೈಗಾರಿಕೆಯ ಕ್ರಿಯೆಗಿಂತ ತುಂಬ ನಿಧಾನ. ಆದ್ದರಿಂದ ವ್ಯವಸಾಯದಲ್ಲಿ ಹೂಡಿದ ಬಂಡವಾಳದ ಆವರ್ತ ನಿಧಾನ ಮತ್ತು ಅನಿರ್ದಿಷ್ಟ. ಗಂಡಾಂತರಗಳು ಮತ್ತು ಅನಿಶ್ಚಿತತೆಗಳು ಕೈಗಾರಿಕಾ ರಂಗಕ್ಕಿಂತ ಕೃಷಿರಂಗದಲ್ಲಿ ಅಧಿಕ. ಆದ್ದರಿಂದ ಕೃಷಿ ಉದ್ದರಿ ಅನೇಕ ಅನಿಶ್ಚಿತತೆಗಳನ್ನೂ ಗಂಡಾಂತರಗಳನ್ನೂ ಎದುರಿಸಬೇಕಾಗುತ್ತದೆ. ಅಲ್ಲದೆ ಕೃಷಿ ರಂಗದಲ್ಲಿ ಹೂಡಿದ ಬಂಡವಾಳಕ್ಕೆ ಬರುವ ಆದಾಯ ಇತರ ಕ್ಷೇತ್ರಗಳಿಗೆ ಹೋಲಿಸಿದರೆ ತೀರ ಕಡಿಮೆ. ಇವೆಲ್ಲ ಕಾರಣಗಳಿಂದಾಗಿ ಕೃಷಿ ಉದ್ದರಿ ವ್ಯವಸ್ಥೆ ಇತರ ಉದ್ದರಿ ವ್ಯವಸ್ಥೆಗಳಿಗಿಂತ ಭಿನ್ನವಾಗಿರುವುದು ಅವಶ್ಯ.

	ಧಾನ್ಯ, ಹಾಲು, ಮೊಟ್ಟೆ, ಮಾಂಸ ಇತ್ಯಾದಿಗಳ ಉತ್ಪಾದನೆಗೆ ತಗಲುವ ನೇರವಾದ ಖರ್ಚಿಗೆ ಕೃಷಿಸಾಲ ಸೀಮಿತವಾಗಿಲ್ಲ. ಕೃಷಿ ಉತ್ಪಾದನೆಗಳ ಶೇಖರಣೆ, ಸಾಗಣೆ ಮತ್ತು ಮಾರಾಟಕ್ಕಾಗಿ ತಗಲುವ ಖರ್ಚುಗಳನ್ನು ಕೂಡ ಕೃಷಿ ಸಾಲ ಪೂರೈಸುವಂಥದಾಗಿರುತ್ತದೆ. ಇದೂ ಅಲ್ಲದೆ ಕೃಷಿ ಉತ್ಪಾದನೆಗೆ ಬೇಕಾಗುವ ಉಪಕರಣಗಳ ಪೂರೈಕೆಗೆ ಮತ್ತು ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಬೇಕಾಗುವ ರೀತಿಯಲ್ಲಿ ಮಾರ್ಪಾಡುಗೊಳಿಸಲು ತಗಲುವ ಹಣದ ಅವಶ್ಯಕತೆಯನ್ನು ಪೂರೈಸುವುದಕ್ಕೆ ಉದ್ದರಿ ಅಗತ್ಯವಾಗಿರುತ್ತದೆ. ಕೃಷಿ ಸಾಲ ಪ್ರತ್ಯಕ್ಷವಾಗಿಯೇ ಆಗಲಿ ಪರೋಕ್ಷವಾಗಿಯೇ ಆಗಲಿ ಕೃಷಿ ಉತ್ಪಾದನೆಗೆ ಸಹಾಯಕವಾಗಿರುತ್ತದೆ.

	ರೈತರಿಗೆ ಅವಶ್ಯವಾದ ಕೃಷಿ ಉದ್ದರಿಯನ್ನು ಅಲ್ಪಾವಧಿ, ಮಧ್ಯಮಾವಧಿ, ಮತ್ತು ದೀರ್ಘಾವಧಿ ಎಂದು ಮೂರು ಬಗೆಯಾಗಿ ವಿಂಗಡಿಸಬಹುದು.

 	1. ಅಲ್ಪಾವಧಿ ಸಾಲ : ಬೆಳೆಗಳಿಗೆ ತಗಲುವ ಖರ್ಚನ್ನು ಪೂರೈಸಲು ಅಲ್ಪಾವಧಿ ಸಾಲ ಬೇಕಾಗುತ್ತದೆ. ಬೆಳೆದ ಫಸಲಿನ ಮಾರಾಟವಾದ ಕೂಡಲೆ ಇದರ ಮರುಪಾವತಿ ಆಗಬೇಕು. ಸಾಮಾನ್ಯವಾಗಿ ಈ ಸಾಲದ ಅವಧಿ ಆರು ತಿಂಗಳುಗಳಿಂದ ಒಂದು ವರ್ಷ. ಕೆಲವು ಬೆಳೆಗಳು (ಉದಾ: ಕಬ್ಬು) ಒಂದು ವರ್ಷಕ್ಕಿಂತ ಹೆಚ್ಚು ಕಾಲ ತೆಗೆದುಕೊಳ್ಳಬಹುದು. ಅಂಥ ಸಂದರ್ಭಗಳಲ್ಲಿ ಅಲ್ಪಾವಧಿ ಸಾಲ ಹದಿನೈದು ತಿಂಗಳುಗಳವರೆಗೂ ವಿಸ್ತರಿಸಬಹುದು. ಕೆಲವು ವೇಳೆ ಸಕಾಲಕ್ಕೆ ಮಳೆಯಾಗದೆ ಅಥವಾ ಕೀಟ ರೋಗದ ಬಾದೆ ಮುಂತಾದ ಕಾರಣಗಳಿಂದ ಫಸಲು ನಷ್ಟವಾಗಿ, ಸಾಲ ತೀರಿಸಲು ರೈತ ನಿಶ್ಶಕ್ತನಾದಲ್ಲಿ ಕೊಟ್ಟ ಸಾಲವನ್ನು ಮುಂದಿನ ಫಸಲು ಬಂದಾಗ ವಸೂಲು ಮಾಡುವ ಹಂಚಿಕೆಯೂ ಇರುತ್ತದೆ. ಬೇಸಾಯಕ್ಕೆ ಸಂಬಂಧಪಟ್ಟಂತೆ ಬೀಜ, ಗೊಬ್ಬರ ಮಂತಾದವನ್ನು ಕೊಂಡುಕೊಳ್ಳಲು, ಕಾರ್ಮಿಕರಿಗೆ ಕೂಲಿ ಕೊಡಲು, ಕಂದಾಯ ಕಟ್ಟಲು, ಉತ್ಪಾದಿಸಿದ ವಸ್ತುಗಳನ್ನು ಸಾಗಿಸಲು, ಮಾರಾಟ ಮಾಡಲು-ಇಂಥ ನಾನಾ ಉದ್ದೇಶಗಳಿಗೆ ಅಲ್ಪಾವಧಿ ಸಾಲ ಅವಶ್ಯಕ. ಇದು ಮುಖ್ಯವಾಗಿ ಬೆಳೆ ಸಾಲ, ಆಧುನಿಕ ಕ್ರಮಗಳನ್ನು ಅನುಸರಿಸಿ ಬೆಳೆಗಳನ್ನು ತಗೆಯಲು, ಸಹಕಾರ ಸಂಘಗಳು ಅಲ್ಪಾವಧಿಯ ಬೆಳೆಸಾಲಗಳನ್ನು ನೀಡುತ್ತಿವೆ. ಸುಧಾರಿತ ಕ್ರಮಗಳ ಅನುಸರಣೆ ಮಟ್ಟ ರೈತನಿಂದ ರೈತನಿಗೆ ಬದಲಾಗುವುದರಿಂದ, ಬೆಳೆಸಾಲವನ್ನು ಪೂರೈಸುವಾಗ ಸಹಕಾರಸಂಘಗಳು ಒಂದು ನಿರ್ದಿಷ್ಟಕ್ರಮವನ್ನು ಅನುಸರಿಸುತ್ತ ಇವೆ. ಬೆಳೆಸಾಲ ಮೂರು ಘಟಕಗಳಾಗಿ ವಿಂಗಡವಾಗಿದೆ. ನಗದಿನ ರೂಪದಲ್ಲಿದ್ದು ಬೆಳೆ ಉತ್ಪಾದನೆಯ ಸಂಬಂಧದಲ್ಲಿ ತಗಲುವ ಸಣ್ಣ ಪುಟ್ಟ ಖರ್ಚುಗಳನ್ನು ನೀಗಿಸುವುದು ಮೊದಲನೆಯ (ಎ) ಘಟಕ ಬೀಜ, ರಾಸಾಯನಿಕಗೊಬ್ಬರ ಮತ್ತು ಇತರ ವಸ್ತುಗಳ ರೂಪದಲ್ಲಿ ಆಧುನಿಕ ಬೇಸಾಯ ಕ್ರಮಗಳ ಅನುಸರಣೆಗೆ ಅನುಕೂಲವಾಗುವಂತೆ ದೊರಕಿಸಿಕೊಡಲಾಗುವುದು; ಎರಡನೆಯ (ಬಿ) ಘಟಕ ಸುಧಾರಿತ ಬೇಸಾಯ ಕ್ರಮಗಳನ್ನು ಅನುಸರಿಸಿದಾಗ ತಗಲುವ ಇತರ ಖರ್ಚುಗಳನ್ನು, ಮೇಲು ಖರ್ಚುಗಳನ್ನು, ಪೂರೈಸಲು ನೀಡುವ ಉದ್ದರಿ; ಮೂರನೆಯದು (ಸಿ) ಇದು ನಗದಿನ ರೂಪದಲ್ಲಿರುತ್ತದೆ. ಎ ಘಟಕ ಎಲ್ಲರಿಗೂ ಒಂದೇ ಗಾತ್ರದ್ದಾಗಿರುತ್ತದೆ. ಬಿ ಮತ್ತು ಸಿ ಘಟಕಗಳ ಗಾತ್ರ ರೈತನಿಂದ ರೈತನಿಗೆ ಅವನ ಅವಶ್ಯಕತೆಗೆ ಅನುಗುಣವಾಗಿ ಬದಲಾಗುತ್ತದೆ. ಕೃಷಿ ಉದ್ದರಿಯನ್ನು ಕೃಷಿ ಉತ್ಪನ್ನದ ಮಾರಾಟಕ್ಕೆ ಜೋಡಣೆ ಮಾಡಲಾಗಿದೆ. ಬೆಳೆಸಾಲವನ್ನು ತೆಗೆದುಕೊಂಡ ರೈತ ತನ್ನ ಉತ್ಪನ್ನವನ್ನು ಸಂಬಂಧಪಟ್ಟ ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘದ ಮೂಲಕ ಮಾರಾಟ ಮಾಡುತ್ತಾನೆ. ಆತನಿಗೆ ಬೆಳೆಸಾಲ ಕೊಟ್ಟ ಸಹಕಾರ ಸಂಘ ಅವನಿಂದ ತನಗೆ ಬರಬೇಕಾದ ಅಸಲು ಮತ್ತು ಬಡ್ಡಿಯನ್ನು ವಸೂಲಿ ಮಾಡಿಕೊಳ್ಳಲು ಇದರಿಂದ ಸಹಾಯವಾಗುತ್ತದೆ.
 
	2. ಮಧ್ಯಮಾವಧಿ ಸಾಲ : ಇದರ ಅವಧಿ 15 ತಿಂಗಳುಗಳಿಂದ 5 ವರ್ಷಗಳವರೆಗೆ. ವ್ಯವಸಾಯ ಉಪಕರಣ, ದನಕರು, ಕೋಳಿ ಮುಂತಾದವನ್ನು ನೀರೆತ್ತುವ ಸಾಧನಗಳನ್ನೂ ಕೊಳ್ಳುವುದಕ್ಕೆ, ವಿದ್ಯುದೀಕರಣಕ್ಕೆ ಹಾಗೂ ಸಣ್ಣ ಪುಟ್ಟ ಭೂ ಅಭಿವೃದ್ಧಿ ಕಾರ್ಯಗಳಿಗೆ ಮಧ್ಯಮಾವಧಿ ಸಾಲ ಅಗತ್ಯ. 

 	3. ದೀರ್ಘಾವಧಿ ಸಾಲ : ಇದರ ಅವಧಿ 5 ವರ್ಷಗಳಿಂದ 25 ವರ್ಷಗಳ ವರೆಗೆ, ಜಮೀನು ಕೊಳ್ಳಲು, ಅಭಿವೃದ್ಧಿಪಡಿಸಲು (ಜಮೀನಿನ ಆಬಾದು, ಬೇಲಿ ನಿರ್ಮಾಣ, ಜಮೀನಿನಲ್ಲಿ ಕಟ್ಟಡಗಳ ನೀರಾವರಿ ಕಾಮಗಾರಿ, ಬಾವಿ ತೋಡಿಸುವುದು ಇತ್ಯಾದಿ), ಅಧಿಕ ಬೆಲೆಯ ವ್ಯವಸಾಯ ಯಂತ್ರೋಪಕರಣಗಳನ್ನು ಕೊಳ್ಳಲು, ವಿಶೇಷ ಬೆಳೆಗಳಾದ ಕಾಫಿ, ಚಹ, ತೆಂಗು, ಅಡಕೆ ಮುಂತಾದ ಬೆಳೆಗಳನ್ನು ಹಾಕಲು ನೀಡುವ ಸಾಲ ಈ ರೀತಿಯಾಗಿರುತ್ತದೆ.

	ಕೃಷಿ ಸಾಲದ ಮೂಲಗಳು : ಭಾರತದಲ್ಲಿ ಕೃಷಿ ಸಾಲದ ಅನೇಕ ಮೂಲಗಳಿವೆ. ಅಖಿಲಭಾರತ ಗ್ರಾಮೀಣ ಉದ್ದರಿ ಸರ್ವೇಕ್ಷಣ ಸಮಿತಿಯವರು (ಆಲ್-ಇಂಡಿಯ ರೂರಲ್ ಕ್ರೆಡಿಟ್ ಸರ್ವೆ ಕಮಿಟಿ) ಕೃಷಿ ಸಾಲದ ಮೂಲಗಳನ್ನು ಒಂಬತ್ತು ಮುಖ್ಯ ಗುಂಪುಗಳನ್ನಾಗಿ ವಿಂಗಡಿಸಿದ್ದಾರೆ; ರೈತ ಲೇವಾದೇವಿಗಾರರು, ಲೇವಾದೇವಿಯೇ ಮುಖ್ಯ ಕಸುಬಾಗಿ ಉಳ್ಳವರು, ಜಮೀನುದಾರರು, ಸಂಬಂಧಿಕರು, ವರ್ತಕರು, ಸಹಕಾರ ಸಂಘಗಳು, ಸರ್ಕಾರ, ವಾಣಿಜ್ಯ ಬ್ಯಾಂಕುಗಳು, ಇತರರು.

 	ಈ ನಾನಾ ಮೂಲಗಳನ್ನು ಸಾಂಸ್ಥಿಕ ಮತ್ತು ಸಂಸ್ಥೇತರ ಎಂದು ಎರಡು ಗುಂಪುಗಳಾಗಿ ಮಾಡಬಹುದು. ಸರ್ಕಾರ, ಸಹಕಾರ ಸಂಘಗಳು ಮತ್ತು ವಾಣಿಜ್ಯ ಬ್ಯಾಂಕುಗಳು ಸಾಂಸ್ಥಿಕ ಮೂಲಗಳು. ಉಳಿದವು ಸಂಸ್ಥೇತರ ಮೂಲಗಳು. ಭಾರತದಲ್ಲಿ ಬಹಳ ಕಾಲದಿಂದಲೂ ಸಂಸ್ಥೆತರ ಮೂಲಗಳೇ ಬಹಳಷ್ಟು ಪ್ರಮಾಣದಲ್ಲಿ ಕೃಷಿ ಸಾಲವನ್ನು ಒದಗಿಸುತ್ತ ಬಂದಿವೆ. ಸಾಂಸ್ಥಿಕ ಮೂಲಗಳ ಪಾತ್ರ ಈಗಲೂ ಬಹಳ ಕಡಿಮೆ.

	ಸಾಂಸ್ಥಿಕ ಮೂಲಗಳು ಸಾಮಾನ್ಯವಾಗಿ ಉತ್ಪಾದಕಸಾಲಗಳನ್ನು ಮಾತ್ರ ಕೊಡುತ್ತವೆ. ಅದೂ ಅಲ್ಲದೆ, ಅವು ರೈತನ ಸಾಲ ಹೊರುವ ಸಾಮಥ್ರ್ಯ ಮತ್ತು ಸಾಲವನ್ನು ಹಿಂದಿರುಗಿಸುವ ಸಾಮಥ್ರ್ಯ ಇವೆರಡನ್ನೂ ಗಣನೆಗೆ ತೆಗೆದುಕೊಂಡು ಸಾಲವನ್ನು ಪೂರೈಸುತ್ತವೆ. ಅವಕ್ಕೆ ಹೆಚ್ಚುವರಿ ಲಾಭ ಮಾಡಿಕೊಳ್ಳುವ ಮನೋಭಾವ ಇರುವುದಿಲ್ಲ. ಮತ್ತು ಅವು ನ್ಯಾಯವಾದ ಬಡ್ಡಿದರಗಳನ್ನು ಹಾಕುತ್ತವೆ. ಸಂಸ್ಥೇತರ ಮೂಲಗಳು ಇವಕ್ಕೆ ವಿರುದ್ಧವಾದಂಥವು. ಸಾಂಸ್ಥಿಕ ಮೂಲಗಳೇ ಕೃಷಿ ಸಾಲವನ್ನು ಬಹಳಷ್ಟು ಪ್ರಮಾಣದಲ್ಲಿ ಪೂರೈಸಿದರೆ ರೈತನಿಗೂ ದೇಶಕ್ಕೂ ಒಳ್ಳೆಯದು. ಹೀಗಿದ್ದರೂ ಭಾರತದಲ್ಲಿ 1970ರಲ್ಲಿ ಕೂಡ ಸಂಸ್ಥೇತರ ಮೂಲಗಳು ಒಟ್ಟು ಕೃಷಿ ಉದ್ದರಿಯ ಸೇ. 60ರಷ್ಟನ್ನು ಒದಗಿಸಿದುವು. ಹಿಂದೆ ಇವು ಇನ್ನೂ ಹೆಚ್ಚಿನ ಪಾತ್ರ ವಹಿಸಿದ್ದುವು. ಇನ್ನು ಮುಂದೆ ಸಾಂಸ್ಥಿಕ ಮೂಲಗಳ ಪ್ರಭಾವ ಮತ್ತು ಸಾಲದ ಪ್ರಮಾಣ ಕ್ರಮೇಣ ಹೆಚ್ಚುವುದಕ್ಕೆ ದೇಶದಲ್ಲಿ ಸರಿಯಾದ ವಾತಾವರಣ ಉಂಟಾಗುತ್ತಿದೆ.

	ಸಾಂಸ್ಥಿಕ ಮೂಲಗಳ ಪೈಕಿ ಸಹಕಾರ ಸಂಘಗಳು ಕ್ರಮೇಣ ಪ್ರಾಮಖ್ಯ ಗಳಿಸುತ್ತಿವೆ. ಭಾರತದಲ್ಲಿ ಸಹಕಾರ ಚಳವಳಿ 1904ರಲ್ಲಿ ಪ್ರಾರಂಭವಾದಾಗ ರೈತರಿಗೆ ಸರಿಯಾದ ಕೃಷಿ ಸಾಲದ ಸೌಕರ್ಯಗಳನ್ನು ಕಲ್ಪಿಸಿಕೊಡುವುದೇ ಅದರ ಮುಖ್ಯ ಉದ್ದೇಶವಾಗಿತ್ತು. ರೈತರಿಗೆ ಸಹಕಾರ ಸಾಲ ಬಹಳ ಉತ್ತಮವಾದ ಮೂಲ. ಹಳ್ಳಿಯ ಮಟ್ಟದಲ್ಲಿ ಪ್ರಾಥಮಿಕ ಕೃಷಿ ಉದ್ದರಿ ಸಹಕಾರ ಸಂಘ, ಜಿಲ್ಲಾ ಮಟ್ಟದಲ್ಲಿ ಕೇಂದ್ರ ಸಹಕಾರ ಬ್ಯಾಂಕು ಮತ್ತು ರಾಜ್ಯಮಟ್ಟದಲ್ಲಿ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕು-ಇವು ಮೂರೂ ಸೇರಿ ಪ್ರತಿಯೊಂದು ರಾಜ್ಯದಲ್ಲೂ ಅಲ್ಪಾವಧಿ ಮತ್ತು ಮಧ್ಯಮಾವಧಿಯ ಸಹಕಾರಿ ಕೃಷಿ ಸಾಲವನ್ನು ಪೂರೈಸುವ ವ್ಯವಸ್ಥೆ ಏರ್ಪಡಿಸಿಕೊಂಡಿವೆ. ತಾಲ್ಲೂಕು ಮಟ್ಟದಲ್ಲಿರುವ ಪ್ರಾಥಮಿಕ ಸಹಕಾರಿ ಜಮೀನು ಅಭಿವೃದ್ಧಿ ಬ್ಯಾಂಕು ಮತ್ತು ರಾಜ್ಯಮಟ್ಟದಲ್ಲಿರುವ ಕೇಂದ್ರ ಸಹಕಾರಿ ಜಮೀನು ಅಭಿವೃದ್ಧಿ ಬ್ಯಾಂಕು-ಇವರು ದೀರ್ಘಾವಧಿ ಸಹಕಾರಿ ಕೃಷಿ ಸಾಲವನ್ನು ಪೂರೈಸುತ್ತವೆ. ಮುಂಚೆ ಈ ಬ್ಯಾಂಕನ್ನು ಜಮೀನು ಅಡಮಾನ ಬ್ಯಾಂಕೆಂದು ಕರೆಯಲಾಗುತಿತ್ತು. ಆಗ ಜಮೀನು ಅಡಮಾನ ಬ್ಯಾಂಕುಗಳು ರೈತರಿಗೆ ಮುಖ್ಯವಾಗಿ ಹಳೆಯ ಸಾಲಗಳನ್ನು ತೀರಿಸುವುದಕ್ಕಾಗಿ ದೀರ್ಘಾವಧಿ ಸಾಲಗಳನ್ನು ಕೊಡುತ್ತಿದ್ದುವು. ಆದರೆ, ಈಗ ಜಮೀನು ಅಭಿವೃದ್ಧಿ ಬ್ಯಾಂಕುಗಳು ಜಮೀನು ಅಭಿವೃದ್ಧಿ ಕಾರ್ಯಗಳಿಗೆ ಮಾತ್ರ ದೀರ್ಘಾವಧಿ ಸಾಲ ನೀಡುತ್ತವೆ. 

	ನೇರವಾಗಿ ಕೃಷಿ ಸಾಲವನ್ನು ಪೂರೈಸುವುದರಲ್ಲಿ ಸರ್ಕಾರ ಬಹಳ ಕಡಿಮೆ ಪಾತ್ರವಹಿಸುತ್ತ ಬಂದಿದೆ. ಸರ್ಕಾರ ನೇರವಾಗಿ ಕೊಡುವ ಕೃಷಿ ಸಾಲವನ್ನು ತಕಾವಿ ಸಾಲವೆಂದು ಕರೆಯುತ್ತಾರೆ. 1883ರ ಜಮೀನು ಅಭಿವೃದ್ಧಿ ಸಾಲದ ಕಾಯಿದೆ ಮತ್ತು 1884ರ ವ್ಯವಸಾಯಗಾರರ ಸಾಲದ ಕಾಯಿದೆ ಇವೆರಡೂ ರೈತರಿಗೆ ತಕಾವಿ ಸಾಲಗಳನ್ನು ಒದಗಿಸಿಕೊಡಲು ಸರ್ಕಾರಕ್ಕೆ ಅಧಿಕಾರ ಕೊಡುತ್ತವೆ. 1883ರ ಕಾಯಿದೆ ದೀರ್ಘಾವಧಿ ಕೃಷಿ ಸಾಲವನ್ನು ಮತ್ತು 1884 ರ ಕಾಯಿದೆ ಅಲ್ಪಾವಧಿ ಸಾಲವನ್ನು ಪೂರೈಸುತ್ತವೆ. ಈಗ ತಕಾವಿ ಸಾಲಗಳನ್ನು ಸಹ ಸಹಕಾರ ಸಂಘಗಳ ಮೂಲಕವೇ ಕೊಡಲಾಗುತ್ತಿದೆ. ಸರ್ಕಾರ ನೇರವಾಗಿ ಕೊಡುವ ತಕಾವಿ ಸಾಲದ ಜೊತೆಗೆ ಪರೋಕ್ಷವಾಗಿಯೂ ಸರ್ಕಾರ ಕೃಷಿಸಾಲದ ಪೂರೈಕೆಗೆ ಸಹಾಯ ಮಾಡುತ್ತದೆ. ರಾಜ್ಯ ಸರ್ಕಾರಗಳು ಸಹಕಾರ ಸಂಘಗಳ ಷೇರುಗಳನ್ನು ಕೊಳ್ಳುತ್ತವೆ. ಅಲ್ಲದೆ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಮತ್ತು ಕೇಂದ್ರ ಸಹಕಾರಿ ಜಮೀನು ಅಭಿವೃದ್ಧಿ ಬ್ಯಾಂಕುಗಳು ಭಾರತದ ರಿಸರ್ವ್ ಬ್ಯಾಂಕಿನಿಂದ ತೆಗೆದುಕೊಳ್ಳಬಹುದಾದ ಸಾಲಗಳಿಗೆ ಜಾಮೀನಾಗಿ ನಿಲ್ಲುತ್ತವೆ.

	ಭಾರತದಲ್ಲಿಯ ವಾಣಿಜ್ಯ ಬ್ಯಾಂಕುಗಳು 1969ರ ತನಕ ಕೃಷಿ ಸಾಲಗಳನ್ನು ಕೊಡಲು ಮುಂದೆ ಬರಲಿಲ್ಲ. 1955ರಲ್ಲಿ ಇಂಪೀರಿಯಲ್ ಬ್ಯಾಂಕ್ ಆಫ್ ಇಂಡಿಯವನ್ನು ಇತರ ಹತ್ತು ರಾಜ್ಯ ಬ್ಯಾಂಕುಗಳ ಜೊತೆ ರಾಷ್ಟ್ರೀಕರಣಗೊಳಿಸಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ಎಂದು ಕರೆಯಲಾಯಿತು. ಆಗಿನಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ಕೃಷಿ ಉದ್ದರಿಯನ್ನು ಪೂರೈಸುವುದರಲ್ಲಿ ಸಹಕಾರ ಸಂಘಗಳ ಮೂಲಕ ಸ್ವಲ್ಪ ಮಟ್ಟಿಗೆ ನೆರವಾಗುತ್ತಿದೆ. 1969ರಲ್ಲಿ ಭಾರತದ ವಾಣಿಜ್ಯ ಬ್ಯಾಂಕುಗಳ ಮೇಲೆ ಸಾಮಾಜಿಕ ನಿಯಂತ್ರಣ ತರಲಾಯಿತು. ಅದಾದ ಮೇಲೆ ಕೂಡ ವಾಣಿಜ್ಯ ಬ್ಯಾಂಕುಗಳು ಕೃಷಿ ಉದ್ದರಿ ಪೂರೈಕೆಗೆ ಅಷ್ಟೇನೂ ಮುಂದೆ ಬರಲಿಲ್ಲ. 1969ರ ಜೂನ್ ತಿಂಗಳಲ್ಲಿ 14 ಪ್ರಮುಖ ವಾಣಿಜ್ಯ ಬ್ಯಾಂಕುಗಳ ರಾಷ್ಟ್ರೀಕರಣವಾಯಿತು. ತತ್ಪರಿಣಾಮವಾಗಿ 1969ರಿಂದ ಈಚೆಗೆ ವಾಣಿಜ್ಯ ಬ್ಯಾಂಕುಗಳು ಕೃಷಿ ಸಾಲಗಳನ್ನು ನೀಡಲು ಮುಂದೆ ಬಂದಿವೆ. ಇನ್ನು ಮುಂದೆ ವಾಣಿಜ್ಯ ಬ್ಯಾಂಕುಗಳು ಭಾರತದ ಕೃಷಿ ಸಾಲದ ಪೂರೈಕೆಯಲ್ಲಿ ಮಹತ್ತ್ವದ ಪಾತ್ರ ವಹಿಸುತ್ತವೆಯೆಂದು ನಿರೀಕ್ಷಿಸಲಾಗಿದೆ. ವಾಣಿಜ್ಯ ಬ್ಯಾಂಕುಗಳು ರಾಷ್ಟ್ರೀಕರಣಕ್ಕೆ ಮುಂಚೆ ಕೈಗಾರಿಕೆಗೆ ಕೊಟ್ಟ ಪ್ರಾಮುಖ್ಯ, ವ್ಯವಸಾಯಕ್ಕೆ ತೋರಿಸಿದ ಉದಾಸೀನ, ಇವೆರಡೂ ಪಟ್ಟಿ 4 ರಲ್ಲಿ ಕೊಟ್ಟಿರುವ ಅಂಕಿಗಳಿಂದ ವ್ಯಕ್ತವಾಗುತ್ತವೆ. ಆದರೆ 14 ಪ್ರಮುಖ ಬ್ಯಾಂಕುಗಳ ರಾಷ್ಟ್ರೀಕರಣವಾದಂದಿನಿಂದ ಈಚೆಗೆ ಪರಿಸ್ಥಿತಿ ಬದಲಾಗಿದೆ.

	ಭಾರತದ ರಿಸರ್ವ್ ಬ್ಯಾಂಕ್ ಮತ್ತು ಕೃಷಿ ಉದ್ದರಿ : ಕೃಷಿ ಪ್ರಧಾನವಾದ ಭಾರತದಲ್ಲಿ ಕೃಷಿ ಉದ್ದರಿಯ ಪೂರೈಕೆಯ ಬಗ್ಗೆ ದೇಶದ ಕೇಂದ್ರೀಯ ಬ್ಯಾಂಕಾದ ಭಾರತದ ರಿಸರ್ವ್ ಬ್ಯಾಂಕಿನ ಹೊಣೆಗಾರಿಕೆ ಮಹತ್ತ್ವದ್ದು. ಇದರ ನಿರ್ವಹಣೆಗಾಗಿ ಭಾರತದ ರಿಸರ್ವ್ ಬ್ಯಾಂಕ್ ಒಂದು ಪ್ರತ್ಯೇಕ ಕೃಷಿ ಉದ್ದರಿ ವಿಭಾಗ ಸ್ಥಾಪಿಸಿದೆ. ಇದರ ಉದ್ದೇಶಗಳಿವು :  

1. ಕೃಷಿ ಉದ್ದರಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳ ಪರಿಶೀಲನೆಗಾಗಿ ತಜ್ಞರ ಸಿಬ್ಬಂದಿಯ ನೇಮಕ, 2. ಕೃಷಿ ಸಾಲದ ಬಗ್ಗೆ ಉತ್ತೇಜನ ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೂ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕುಗಳಿಗೂ ಕೇಂದ್ರ ಸಹಕಾರ ಜಮೀನು ಅಭಿವೃದ್ಧಿ ಬ್ಯಾಂಕುಗಳಿಗೂ ಮಾರ್ಗದರ್ಶನ ನೀಡುವುದು. 3. ಕೃಷಿ ಉತ್ಪಾದನ ಕಾರ್ಯಗಳಿಗೆ ಮತ್ತು ದವಸಧಾನ್ಯಗಳ ಸಾಗಾಣಿಕೆಗೆ ರಾಜ್ಯ ಸಹಕಾರ ಬ್ಯಾಂಕುಗಳ ಮೂಲಕ ಕೃಷಿ ಉದ್ದರಿ ಒದಗಿಸುವುದು.

	ಕೃಷಿ ಮರುಹಣಕಾಸು ಸಂಸ್ಥೆ (ಅಗ್ರಿಕಲ್ಚರಲ್ ರೀಫೈನಾನ್ಸ್ ಕಾರ್ಪೋರೇಷನ್) : ಇದನ್ನು ಭಾರತದ ರಿಸರ್ವ್ ಬ್ಯಾಂಕಿನ ಒಂದು ಅಂಗಸಂಸ್ಥೆಯಾಗಿ 1963ರಲ್ಲಿ ಸ್ಥಾಪಿಸಲಾಯಿತು. ಕೃಷಿ ದೀರ್ಘಾವಧಿ ಸಾಲಕ್ಕೆ ಈ ಸಂಸ್ಥೆ ಕೇಂದ್ರ ಮರುಹಣಕಾಸಿನ ಮೂಲವಾಗಿ ಕಾರ್ಯ ನಿರ್ವಹಿಸುತ್ತದೆ. ಈ ಸಂಸ್ಥೆಯಿಂದ ಮುಂದೆ ತೋರಿಸಿರುವ ಕೃಷಿ ಕಾರ್ಯಗಳಿಗೆ ದೀರ್ಘಾವಧಿ ಸಾಲವನ್ನು, ಜಮೀನು ಅಭಿವೃದ್ದಿ ಬ್ಯಾಂಕುಗಳ ಮೂಲಕ, ಕೊಡಲಾಗುತ್ತದೆ; 1. ಜಮೀನು ಹದಗೊಳಿಸಲು ಮತ್ತು ನೀರಾವರಿಗೆ ಅನುಕೂಲವಾಗುವಂತೆ ಅದನ್ನು ಸಿದ್ಧಪಡಿಸಲು, 2. ಕಾಫಿ, ಚಹ, ರಬ್ಬರ್, ತೆಂಗು, ಅಡಕೆ ಮುಂತಾದ ತೋಟದ ಬೆಳೆಗಳನ್ನು ಬೆಳೆಯಲು 3. ವ್ಯವಸಾಯವನ್ನು ಯಾಂತ್ರೀಕರಿಸಲು ಮತ್ತು 4. ದನಕರು, ಕೋಳಿ ಮುಂತಾದವನ್ನು ಸಾಕಲು. ಈ ಸಂಸ್ಥೆಯ ಸ್ಥಾಪನೆಯಿಂದ ವ್ಯವಸಾಯದ ಅಭಿವೃದ್ಧಿಗೆ ಕೃಷಿಸಾಲ ಒದಗಿಸುವ ಕಾರ್ಯಕ್ಕೆ ಉತ್ತೇಜನ ದೊರಕಿದಂತಾಗಿದೆ. 

	ಭಾರತದಲ್ಲಿ ಕೃಷಿ ಸಾಲದ ಬೇಡಿಕೆಗೂ ಹಾಗು ಪೂರೈಕೆಗೂ ನಡುವಣ ಅಂತರ ಬಲು ಹೆಚ್ಚು. ಸಾಕಷ್ಟು ಮೊತ್ತದಲ್ಲಿ ಕೃಷಿ ಸಾಲ ದೊರೆಯದಿದ್ದಲ್ಲಿ ಅದು ವ್ಯವಸಾಯದ ಅಭಿವೃದ್ದಿಯಲ್ಲಿ ಒಂದು ಮುಖ್ಯವಾದ ಅಡಚಣೆಯಾಗಿ ಪರಿಣಮಿಸುತ್ತದೆ. ರಿಸರ್ವ್ ಬ್ಯಾಂಕಿನ ಅಖಿಲಭಾರತ ಗ್ರಾಮೀಣ ಸಾಲ ಪರಿಶೀಲನ ಸಮಿತಿ (1969) 1970-71ರಲ್ಲಿ ಭಾರತದಲ್ಲಿ ಒಟ್ಟು ರೂ. 2,280 ಕೋಟಿಗಳ ಅವಶ್ಯಕತೆ ಇರುವುದಾಗಿಯೂ ಅದರಲ್ಲಿ ರೂ. 1,106 ಕೋಟಿಗಳಷ್ಟು ಅಲ್ಪಾವಧಿಯದೆಂದೂ ಅಂದಾಜು ಮಾಡಿದೆ. 1973-74ರ ಹೊತ್ತಿಗೆ ರೂ. 2.000 ಕೋಟಿ ಅಲ್ಪಾವಧಿ ಸಾಲದ ಅಗತ್ಯವಾಗುವುದೆಂದು ಅಂದಾಜು ಮಾಡಿದೆ.

	ವ್ಯವಸಾಯವೂ ಒಂದು ಉದ್ಯಮವಾದ್ದರಿಂದ ಕೃಷಿ ಸಾಲದಿಂದ ಅಧಿಕೋತ್ಪಾದನೆಯೂ ಬಂಡವಾಳ ನಿರ್ಮಾಣವೂ ಸಾಧ್ಯವಾಗಬೇಕು. ಅದನ್ನು ನೀಡುವವರೂ ಪಡೆಯುವವರೂ ಈ ವಹಿವಾಟನ್ನು ವ್ಯಾವಹಾರಿಕವಾಗಿಯೇ ನೋಡುವುದು ಅವಶ್ಯ. ಕೃಷಿ ಸಾಲ ನೀಡುವಾಗ, ಸಾಲ ಪಡೆಯುವವನ ಸಂಪಾದನೆಯ ಗಾತ್ರ, ಸಾಲ ತೀರಿಸುವ ಸಾಮಥ್ರ್ಯ, ಅನಿರೀಕ್ಷಿತ ನಷ್ಟವನ್ನು ಭರಿಸುವ ಶಕ್ತಿ, ಇವೆಲ್ಲವನ್ನೂ ಒಂದು ರೈತ ಕುಟುಂಬದ ಪೂರ್ತಿ ಸಾಗುವಳಿಯ ಜಮೀನಿಗೆ ಸಂಬಂಧಪಟ್ಟಂತೆ ಗಣನಗೆ ತೆಗೆದುಕೊಳ್ಳಬೇಕೇ ಹೊರತು, ಆ ರೈತ ಕುಟುಂಬದ ವ್ಯವಸಾಯೋದ್ಯಮದ ಬೇರೆಬೇರೆ ಭಾಗಗಳಿಗೆ ಸಂಬಂಧಪಟ್ಟಂತೆ ಅಲ್ಲ. ಅದು ಇನ್ನೊಬ್ಬರ ಜಂಟಿ ಖಾತರಿಯನ್ನೇ ಅವಲಂಬಿಸಬಾರದು; ಉತ್ಪಾದನೆಯ ಮತ್ತು ಮರುಪಾವತಿ ಸಾಮಥ್ರ್ಯ ಸಂಪಾದನೆಯ ದೃಷ್ಟಿ ಅತ್ಯಂತ ಮುಖ್ಯ.										(ಜಿ.ಎಸ್.ಸಿ.; ಆರ್.ಆರ್.ಎ.ಎಂ.; ಬಿ.ಆರ್.ಪಿ.)
									(ಪರಿಷ್ಕರಣೆ : ಡಾ. ಟಿ ಎನ್ ಪ್ರಕಾಶ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ